ಪ್ರಪಂಚದ ಉಷ್ಣ ಹಾಗೂ ಸಮಶೀತೋಷ್ಣವಲಯಗಳ ಸಮುದ್ರಗಳಲ್ಲಿ ಕಂಡುಬರುವ ಹಲವಾರು ಬಗೆಯ ಮೀನುಗಳು (ಜ್ಯೂ ಪಿಷ್) ಪರ್ಸಿಫಾರ್ಮೀಸ್ ಗಣದ ಸಯೀನೀಡಿ ಕುಟುಂಬಕ್ಕೆ ಸೇರಿದ ಸಯೀನ, ಸೂಡೊಸಯೀನ ಜಾತಿಯ ಕೆಲವು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಈ ಮೀನುಗಳು ತಮ್ಮ ಗಾಳಿಚೀಲಗಳಿಂದ ಮಾಡುವ ಶಬ್ದ ತಮಟೆ ಬಡಿದ ಶಬ್ದವನ್ನು ಹೋಲುತ್ತದೆ. ಆದ್ದರಿಂದ ಈ ಹೆಸರು ಬಂದಿದೆ. (ಭಾರತದ ಪಶ್ಚಿಮ ಕರಾವಳಿಯಲ್ಲಿ ಘೊಳ್ ಎಂದರೆ ತಮಟೆ ಎಂದರ್ಥ). ಸಾಮಾನ್ಯ ಆಂಗ್ಲ ಭಾಷೆಯಲ್ಲಿ ಇವುಗಳಿಗೆ ಜ್ಯೂ ಫಿಷ್, ಡ್ರಮ್ ಫಿಷ್ ಎಂಬ ಹೆಸರುಗಳಿವೆ. ಭಾರತ, ಮಾಯನ್ಮಾರ್, ಮಲಯ, ಸುಮಾತ್ರ, ಪುರ್ವ ಆಫ್ರಿಕ, ಉತ್ತರ ಮತ್ತು ದಕ್ಷಿಣ ಅಮೆರಿಕಗಳ ಕರಾವಳಿಗಳಲ್ಲಿ ಈ ಮೀನುಗಳು ಕಂಡುಬರುತ್ತವೆ. ಕೆಲವೊಮ್ಮೆ ನದೀಮುಖಜ ಪ್ರದೇಶಗಳ ಮುಖಾಂತರ ಒಳನಾಡಿಗೂ ಬರುವುದುಂಟು.

ಭಾರತದಲ್ಲಿ ಘೊಳ್ ಮೀನುಗಳು ಸೂಡೋಸಯೀನ ಡಯಕಾಂತಸ್ ಪ್ರಭೇದದವಾಗಿವೆ. ಇದರೊಂದಿಗೆ ಓಟೊಲಿತಾಯ್ಡಿಸ್ (ಕೋತ್ ಮೀನು), ಓಟೋಲಿತಸ್, ಸಯೀನ, ಜಾನಿಯಸ್ (ಧೋಮ ಮೀನುಗಳು) ಸಯಿನಿಡೆ ಕುಟುಂಬಕ್ಕೆ ಸೇರಿದವುಗಳೇ ಆಗಿವೆ.
ಮಧ್ಯಮ ಗಾತ್ರದ ಮೀನುಗಳಿವು; ಸುಮಾರು 120 ರಿಂದ 150 ಸೆಂ.ಮೀ. ಉದ್ದದವರೆಗೆ ಬೆಳೆಯುತ್ತವೆ. ತೂಕ ಸುಮಾರು 5 ಕೆಜಿ. ಮಹಾರಾಷ್ಟ್ರದ ಕರಾವಳಿಯಲ್ಲಿ 5-11 ಕೆಜಿ. ವರೆಗಿನ ಮೀನುಗಳು ದೊರೆತಿವೆ. ದೃಢವಾದ ದೇಹ, ಆಳವಾದ ಕಚ್ಚನ್ನು ತೋರುವ ಬೆನ್ನಿನ ಈಜುರೆಕ್ಕೆ, ಎರಡು ಮುಳ್ಳುಗಳುಳ್ಳ ಗುದದ ಈಜುರೆಕ್ಕೆ, ಎದೆಯ ಈಜುರೆಕ್ಕೆಗಳ ಕಕ್ಷದಲ್ಲಿ ಮಾಂಸಲ ರಚನೆಗಳಿರುವುದು, ಮೊಂಡಾಗಿ ಕತ್ತರಿಸಿದಂತೆ ಇರುವ ಬಾಲದ ಈಜುರೆಕ್ಕೆ – ಇವು ಘೊಳ್ ಮೀನುಗಳ ಗುಣಲಕ್ಷಣಗಳು. ದೇಹದ ಬಣ್ಣ ವಿವಿಧ ಪ್ರಭೇದಗಳಲ್ಲಿ ಬೇರೆ ಬೇರೆ ರೀತಿಯಾಗಿರುವುದಾದರೂ ಮೂಲತಃ ಕಂದು ಇಲ್ಲವೆ ಬೂದಿ ಬಣ್ಣ, ಅಲ್ಲಲ್ಲಿ ಊದಾ, ನೀಲಿ ಮುಂತಾದ ಬಣ್ಣದ ಚುಕ್ಕೆಗಳಿರುವುದಂಟು.

ಈ ಮೀನುಗಳು ಮಾಂಸಾಹಾರಿಗಳು. ಇತರ ಜಾತಿಯ ಮೀನುಗಳು, ಕಠಿಣಚರ್ಮಿಗಳು, ವಲ್ಕವಂತಗಳು, ಮತ್ತು ಮೃದ್ವಂಗಿಗಳನ್ನು ತಿಂದು ಜೀವಿಸುತ್ತವೆ. ಇವುಗಳ ಸಂತಾನೋತ್ಪತ್ತಿಯ ಕಾಲ ಮೇ-ಜುಲೈ.
ಮಹಾರಾಷ್ಟ್ರ ಮತ್ತು ಕಾಠೇವಾಡಗಳಲ್ಲಿ ಈ ಮೀನುಗಳನ್ನು ಗಣನೀಯ ಪ್ರಮಾಣದಲ್ಲಿ ಹಿಡಿಯಲಾಗುತ್ತದೆ. 2002 ನೆಯ ವರ್ಷದಲ್ಲಿ ಸುಮಾರು 2.68 ಲಕ್ಷ ಟನ್ಗಳಷ್ಟು ಮೀನನ್ನು ಹಿಡಿಯಲಾಗಿದೆ. ಇವು ಒಳ್ಳೆಯ ಆಹಾರದ ಮೀನುಗಳು. ಇವುಗಳ ಗಾಳಿಚೀಲದಿಂದ ತಯಾರಾಗುವ ಉಪ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆಯಿದ್ದು ಸ್ಥಳೀಯವಾಗಿ ಇದರ ಗಾಳಿಚೀಲವನ್ನು ಮಾವ್ ಗಳೆಂದು ಕರೆಯುತ್ತಾರೆ. ಉತ್ತಮ ಗುಣಮಟ್ಟದ ಮಾವ್ಗಳನ್ನು ರಫ್ತು ಮಾಡಲಾಗುತ್ತದೆ. ಇದನ್ನು ವೈನ್ ತಯಾರಿಕಾ ಹಂತದಲ್ಲಿ ಶುದ್ಧೀಕರಣಕ್ಕೆ ಬಳಸಲಾಗುತ್ತದೆ. ಒಣಗಿಸಿದ ಗಾಳಿಚೀಲಗಳನ್ನು ಐಸಿಂಗ್ಲಾಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.	(ಎಸ್.ಪಿ.ಎಂ.; ಟಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ